ಈನೋತೀರ- 
ಒನಾಗರೇಸಿ ಕಂಟುಂಬದ ಒಂದು ಸಸ್ಯ. ಹೂಬಿಡವ, ಬಹುವಾರ್ಷಿಕ (ಪೆರಿನಿಯಲ್), ದಾಂಗುಡಿ ಇಡುವ (ಟ್ರೈಲಿಂಗ್), ಪರ್ಣಸಸಿ (ಹರ್ಬ್), ಹೂಗಳು ದೂಡ್ಡವು, ಬಟ್ಟಲಿನಾಕಾರ, ಬಲು ಆಕರ್ಷಕ. ಬಣ್ಣಗಳ ವೈವಿಧ್ಯವೂ ಹಾಗೆಯೇ - ಬಿಳಿ, ಹಳದಿ, ಗುಲಾಬಿ, ನಸುಗೆಂಪು. ಹೂಗಳು ಅರಳುವುದು ಸಾಯಂಕಾಲವಾದ್ದರಿಂದ ಇಂಗ್ಲಿಷ್ ಭಾಷೆಯಲ್ಲಿ ಈ ಸಸ್ಯವನ್ನು ಈವ್ನಿಂಗ್ ಪ್ರಿಮೋಸ್ ಎಂದು ಕರೆಯುತ್ತಾರೆ. ಈನೋತೀರ ಕುಲದ (ಜೀನಸ್) ಸಸ್ಯಗಳು ಬಹುರೂಪಿಗಳಾಗಿರುವುದರಿಂದ (ಪಾಲಿಮಾರ್ಫಿಕ್) ಈ ವಂಶದ ಜಾತಿಯ ಬಗ್ಗೆ ಭಿನ್ನಾಭಿಪ್ರಾಯಗಳಿವೆ. ಇವುಗಳಲ್ಲಿರುವ ಸುಮಾರು 200 ಪ್ರಭೇದಗಳಲ್ಲಿ ಏಕ ಋತು, ದ್ವಿಋತು ಬಹುವಾರ್ಷಿಕ ಸಸ್ಯಗಳಿವೆ.

ಇತರ ವಿವರಗಳು : ಎಲೆಗೆ ತೂಟ್ಟು ಇರಬಹುದು ಅಥವಾ ಇಲ್ಲದಿರಬಹುದು; ಪರ್ಯಾಯ; ನಯವಾದ ಅಥವಾ ಹಲ್ಲು ಅಂಚು; ಭಾಗಿತ. ಒಂಟಿ ಅಥವಾ ಕೆಲವು ಸಲ ಜೋಡಿ ಹೂ; ಕಂಕಳು ನಾಲ್ಕು ಮುಖದ ಹೈಪಂತಿಯಂ; ಉದುರುವ, ಹಿಂದಕ್ಕೆ ಬಾಗಿದ ನಾಲ್ಕು ಭಾಗಗಳು ಇರುವ ದ್ವಿಲಿಂಗಿಗಳು; ನಾಲ್ಕು ದಳ; ತೊಟ್ಟು ಇಲ್ಲದ, ವಿರುದ್ಧ ಕರನೆಯಾಕಾರ, ವಿರುದ್ಧ ಹೃದಯಾಕಾರ; ಕೇಸರುಗಳು ಎಂಟು. ಪರ್ಯಾಯವಾಗಿ ನಾಲ್ಕು ಚಿಕ್ಕವು ನಾಲ್ಕು ದೊಡ್ಡವು. ನಾಲ್ಕು ಕೋಶದ ಕೆಳ ಅಂಡಾಶಯವಿದೆ. ಹಣ್ಣು ಒಂದು ಅಥವಾ ಕ್ಯಾಪ್ಸೂಲ್

ಬೇಸಾಯದಲ್ಲಿರುವ ಜಾತಿಗಳು: ಈ ಬೈನಿಸ್; ಈ. ಗ್ರಾಂಡಿಫ್ಲೋರಾ: ಈ. ಲೆಮಾರ್ಕಿಯೊನಾ; ಈ. ಡ್ರೂಮಂಡೈ; ಈ. ಒಡರೇಟ ಈ. ಹಿಸ್ಟೊರೇಟ; ಇ. ಟ್ರಿಕೊಕ್ಯಾಲಿಕ್ಸ್; ಈ. ಕ್ಯಾಲಿಫೋರ್ನಿಕ.

ವೃದ್ಧಿ: ಈನೋತೀರ ಸಸ್ಯಗಳನ್ನು ಬೀಜಗಳಿಂದ ಸುಲಭವಾಗಿ ವೃದ್ಧಿ ಮಾಡಬಹುದು. ಬೀಜಗಳನ್ನು ನೇರವಾಗಿ ಮಡಿ ಅಂಚು ಅಥವಾ ಕುಂಡಗಳಲ್ಲಿ ಹಾಕಿ ಮೊಳಕೆ ಬಂದ ಅನಂತರ ಒತ್ತಾಗಿರುವ ಸಸಿಗಳನ್ನು ತೆಗೆದು ಹಾಕಬೇಕು. ಪಾತಿಯಲ್ಲಿ ಬೆಳೆಸಿದ ಸಸಿಗಳನ್ನು ಕಿತ್ತು ನೆಟ್ಟರೆ ಸಸಿಗಳು ಸತ್ತುಹೋಗುತ್ತವೆ. ಸಮುದ್ರ ಮಟ್ಟದಿಂದ 2,500' ಗಿಂತ ಎತ್ತರ ಪ್ರದೇಶಗಳಲ್ಲಿ ಇವು ಉತ್ಕøಷ್ಟವಾಗಿ ಬೆಳೆಯುತ್ತವೆ. ಬೀಜ ಬಿತ್ತಿದ 3-31/2 ತಿಂಗಳುಗಳಲ್ಲಿ ಸಸ್ಯಗಳು ಹೂಬಿಡುತ್ತದೆ. ಮೈದಾನ ಪ್ರದೇಶಗಳಲ್ಲಿ ಬೀಜ ಬಿತ್ತನೆ ಮಾಡಲು ಸೆಪ್ಟೆಂಬರ್ ತಿಂಗಳು ಯೋಗ್ಯವಾದ ಕಾಲ. ಇದೊಂದು ಅಲಂಕಾರ ಸಸ್ಯ. ಇದರ ಬೇಸಾಯ ಜೌಗಿಲ್ಲದ ಫಲವತ್ತಾದ ಮಣ್ಣಿನಲ್ಲಿ ಯಶಸ್ವಿಯಾಗುತ್ತದೆ. ಸಸ್ಯಗಳಿಗೆ ಯಥೇಚ್ಛವಾದ ಗಾಳಿ, ಬೆಳಕು ಮತ್ತು ಬಿಸಿಲು ಅಗತ್ಯ. 
(ಎಂ.ಎಚ್.ಎಂ.)

ಚರಿತ್ರೆ: ಈ ಶತಮಾನದ ಆದಿಯವರೆಗೂ ಸಾಮಾನ್ಯ ಸಸ್ಯವಾಗಿದ್ದ ಈನೋತೀರ ಲಾಮಾರ್ಕಿಯಾನ ಹ್ಯೂಗೊ ಡೆವ್ರಿಸ್ (1848-1935) (ನೋಡಿ— ಡೆವ್ರಿಸ್.-ಹ್ಯೂಗೊ) ಎಂಬ ಸುಪ್ರಸಿದ್ಧ (ಅನುವಂಶೀಯತೆ ಶಾಸ್ತ್ರದಲ್ಲಿ) ವಿಜ್ಞಾನಿಯ ಗಮನ ಅದರ ಮೇಲೆ ಬಿದ್ದೊಡನೆ ವಿಜ್ಞಾನ ಕ್ಷೇತ್ರದಲ್ಲಿ ಬಹಳ ಪ್ರಾಮುಖ್ಯಗಳಿಸಿತು. ಡೆವ್ರಿಸ್ ಇದನ್ನು ಹಾಲೆಂಡ್ ಬಳಿ ಪತ್ತೆ ಹಚ್ಚಿದ. ವೈಜ್ಞಾನಿಕ ಪರೀಕ್ಷೆಯಲ್ಲಿ ಇದು ಅದರ ಪಿತೃಗಳಿಗಿಂತ ವಿಭಿನ್ನವಾಗಿರುವುದನ್ನು ಗಮನಿಸಿ ತನ್ನ ಉದ್ಯಾನದಲ್ಲಿ ಬೆಳೆಯುತ್ತಿದ್ದ ಅಂಥದೇ ಜಾತಿಯ ಗಿಡದೊಂದಿಗೆ ಹೋಲಿಸಿ, ದೃಗ್ಗೋಚರವಾಗಿ ಕಂಡುಬಂದ ಅನುವಂಶೀಯತೆ ಬದಲಾವಣೆಯನ್ನು ವಿಕೃತಿ ಎಂದು ಹೇಳಿದ. ಆ ಕಾಲಕ್ಕೆ ಅನುವಂಶೀಯತೆ ಅಷ್ಟಾಗಿ ಬೆಳೆದಿರಲಿಲ್ಲವಾದ್ದರಿಂದ ಈ ಹೇಳಿಕೆ ಹೆಚ್ಚು ವೈಜ್ಞಾನಿಕ ಪರೀಕ್ಷೆಗೆ ಒಳಗಾಗಲಿಲ್ಲ. ಕ್ಲೀಲೆಂಡ್, ರೆನ್ನರ್ ಮುಂತಾದವರು ಕ್ರಮೇಣ ಪರೀಕ್ಷೆಗಳನ್ನು ನಡೆಸಿ ಡೆವ್ರಿಸ್ ಸೂಚಿಸಿದ ವಿಕೃತಿ ನಿಜವಾದ ವಿಕೃತಿ ಅಲ್ಲವೆಂದೂ ಅದು ವರ್ಣರೇಖೆಗಳಲ್ಲಿ ಕಂಡುಬರುವ ವಿಷಮ ರೀತಿಯ ಜೀನು ಗುಣವೆಂದು ತಿಳಿಸಿದರು. ಸ್ವಾಭಾವಿಕವಾಗಿ ಈ ದಿಸೆಯಲ್ಲಿ ಆಸಕ್ತಿ ಹೆಚ್ಚಿತು. ಈನೋರೀತಿ ಜಾತಿಯಲ್ಲಿ ಕಂಡುಬರುವ ಬಹುತೇಕ ಸಸ್ಯಗಳಲ್ಲಿ ಸಂಶೋಧನೆ ನಡೆಸಿದರು. ಅವುಗಳಲ್ಲಿ ಇದೇ ಬಗೆಯ ವಿಷಮರೀತಿಯ ಜೀನು ಗುಣಗಳೇ ಕಂಡುಬಂದರೂ ಈನೋತೀರ ಹುಕೇರಿ ಎಂಬುದರಲ್ಲಿ ಸಮಾನ ರೀತಿಯ ಜೀನು ಗುಣ ಕಂಡುಬಂದಿತು. ತಳೀಕರಣ ಪ್ರಯೋಗಗಳಿಂದ ಈ ಬಗೆಯ ವ್ಯತ್ಯಾಸ ಹೇಗೆ ಬರುತ್ತದೆ ಎಂಬುದನ್ನು ಈಗ ವೈಜ್ಞಾನಿಕವಾಗಿ ವಿವರಿಸಲಾಗಿದೆ.

ಸಾಮಾನ್ಯ ರೀತಿಯ ಜೀನುಗುಣಗಳುಳ್ಳ ಸಸ್ಯಗಳಿಗೆ ಅಡ್ಡಹಾಯಿಕೆ ನಡೆದು, ಕೆಲವು ವೈಪರೀತ್ಯಗಳಿಂದ ಅಂಟಿಕೊಂಡ ಜೀನುಗಳು ಬೇರ್ಪಟ್ಟು, ಹೊಸ ನಮೂನೆಯ ಗಿಡದ ಉದ್ಭವವೇ ಈ ಲಾಮಾರ್ಕಿಯಾನದಲ್ಲಿ ಡೆವ್ರ್ರಿಸ್ ಗಮನಿಸಿದ ವಿಕೃತಿ ಎಂದು ಈಗ ತಿಳಿದಿದೆ. ಇಂಥ ಕ್ರಿಯೆ ನಿಸರ್ಗದಲ್ಲಿ ಅಪೂರ್ವವಾಗಿ ಆಗುತ್ತದೆ. ಡೆವ್ರಿಸ್‍ನಿಂದ ಪುಷ್ಟಿಗೊಂಡ ಈನೋತೀರದ ಅನುವಂಶೀಯತೆ ಪರಿಶೀಲನೆ ತಳಿವಿಜ್ಞಾನಕ್ಷೇತ್ರದಲ್ಲಿ ಬಹುಮುಖ್ಯ ಸಾಧನೆಯೆನಿಸಿದೆ. ಈ ಸಾಧನೆಯ ನೇರವಾದ ಈನೋತೀರ ಸಸ್ಯವೂ ಪ್ರಾಧಾನ್ಯಕ್ಕೆ ಬಂದಿದೆ. 
(ಎ.ಎನ್.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ